ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಬೇಕು ?
ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ ?
ಹೇಗೆ ಉತ್ತಮ ಆಹಾರ ದೇಹಕ್ಕೆ ಮುಖ್ಯವೋ ಅದೇ ರೀತಿ ಅತ್ಯುತ್ತಮ ನಿದ್ದೆ ಕೂಡ ಅಷ್ಟೇ ಮುಖ್ಯ. ಅಂತಹ ನಿದ್ದೆಯನ್ನೇ ಕಳೆದುಕೊಂಡು ಬಿಟ್ಟರೆ ಒತ್ತಡ, ಚಿಂತೆ ಹಾಗೂ ನಿರಾಸಕ್ತಿ ಮೂಡುತ್ತದೆ. ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ? ಇದಂತೂ ಸಾಮಾನ್ಯವಾಗಿ ಕೇಳಿಬರುತ್ತಲೇ ಇರುವ ಪ್ರಶ್ನೆ. ಈ ಪ್ರಶ್ನೆಯೇ ನಿಮ್ಮ ನಿದ್ದೆಯನ್ನೂ ಕೆಡಿಸಿದ್ದರೆ ಇನ್ನು ಯೋಚಿಸುವ ಅಗತ್ಯ ಇಲ್ಲ.
ಅಂದಹಾಗೆ ವಾಸ್ತುಶಾಸ್ತ್ರ ಎಂಬುದು ವಿಜ್ಞಾನ ಮತ್ತು ಜೀವನದ ಮಿಳಿತ. ಅದರಲ್ಲಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಲಾಗಿದೆ.
ನಿದ್ದೆ ನಾಳೆಯ ದಿನಕ್ಕೆ ಹೊಸ ಚೈತನ್ಯವನ್ನು ತುಂಬುವ ಪ್ರಕ್ರಿಯೆ. ಉತ್ತಮ ನಿದ್ದೆ ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಅದರಲ್ಲೂ ನಾವು ಮಲಗುವಾಗ ಕೆಲವೊಂದು ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಅನೇಕ ಪ್ರಯೋನಜಗಳಿವೆ. ಅವು ಯಾವುವು ಎನ್ನುವುದರ ಮಾಹಿತಿ ಈ ಲೇಖನದಲ್ಲಿದೆ.
ನೀವು ಹೇಗೆ ಮಲಗುತ್ತೀರಿ ಎಂಬುದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಅವಲಂಬಿಸಿರುತ್ತದೆ. ಮಲಗುವಾಗ ನಿಮ್ಮ ಸ್ಥಾನ ಸರಿಯಾಗಿಲ್ಲದಿದ್ದರೆ, ನಿಮ್ಮ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಮತ್ತೊಂದೆಡೆ, ನಿಮ್ಮ ತಲೆಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಮಲಗುವುದು ನಿಮಗೆ ಉತ್ತಮ ನಿದ್ರೆ ನೀಡುವುದಲ್ಲದೆ ನಿಮ್ಮನ್ನು ಆರ್ಥಿಕವಾಗಿ ಸಮೃದ್ಧಿಯನ್ನಾಗಿಸುತ್ತದೆ. ಮಲಗಲು ಯಾವ ದಿಕ್ಕು ಸೂಕ್ತ ಅದರ ಪ್ರಯೋಜನಗಳೇನು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ತಲೆಯನ್ನು ದಕ್ಷಿಣಕ್ಕೆ ಇಟ್ಟು ಮಲಗುವುದರಿಂದ ಆಗುವ ಲಾಭಗಳು
ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ನಿಮ್ಮ ತಲೆಯಿಟ್ಟು ಮಲಗುವುದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ ಮತ್ತು ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಂದ ದೂರವಿರಿಸುತ್ತದೆ ಎಂಬ ನಂಬಿಕೆ ಇದೆ. ದಕ್ಷಿಣದಲ್ಲಿ ನಿಮ್ಮ ಪಾದಗಳನ್ನು ಇಡಬಾರದು ಎನ್ನುವುದನ್ನು ನೆನಪಿನಲ್ಲಿಡಿ. ಇದನ್ನು ಧಾರ್ಮಿಕ ದೃಷ್ಟಿಯಿಂದ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಅದೇ ಸಮಯದಲ್ಲಿ ವೈಜ್ಞಾನಿಕ ದೃಷ್ಟಿಕೋನದಿಂದಲೂ ಇದು ಹಾನಿಕಾರಕವಾಗಿದೆ. ದಕ್ಷಿಣಕ್ಕೆ ಪಾದವಿಟ್ಟರೆ, ಕಾಂತೀಯ ಪ್ರವಾಹವು ಪಾದಗಳನ್ನು ಪ್ರವೇಶಿಸುತ್ತದೆ ಮತ್ತು ತಲೆಯ ಮೂಲಕ ಹೊರಬರುತ್ತದೆ. ಇದು ನಿಮ್ಮ ಮನಸ್ಸಿನಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿದ್ರೆಯನ್ನು ತೊಂದರೆಗೊಳಿಸುತ್ತದೆ ಎನ್ನಲಾಗುತ್ತದೆ.
ಮನೆಯ ಹಿರಿಯರು, ಯಜಮಾನ- ಯಜಮಾನಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ. ಹಲವು ಪದ್ಧತಿ ಹಾಗೂ ಸಂಸ್ಕೃತಿ ಪ್ರಕಾರ ಈ ದಿಕ್ಕಿಗೆ ತಲೆ ಇರಿಸಿಕೊಳ್ಳುವುದು ಸರಿ. ವಾಸ್ತು ಪ್ರಕಾರ, ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಜೊತೆಗೆ ಸಂತೋಷವೂ ಸಿಕ್ಕಿ, ಕನಸುಗಳು ಈಡೇರುತ್ತವೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನ ಆಗುತ್ತಿವೆ, ಪೂರ್ತಿ ಮಾಡಲು ಆಗುತ್ತಿಲ್ಲ ಅನಿಸಿದರೆ ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿ, ಪ್ರಯತ್ನಿಸಿ ನೋಡಿ. ದಕ್ಷಿಣ ದಿಕ್ಕಿಗೆ ಮಲಗುವುದರಿಂದ ಮನಶ್ಶಾಂತಿ ದೊರೆತು, ಆರೋಗ್ಯ ವೃದ್ಧಿ ಆಗುತ್ತದೆ.
ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಸಿಗುವ ಪ್ರಯೋಜನಗಳು
ದಕ್ಷಿಣದ ನಂತರ ಮಲಗುವ ಎರಡನೇ ಸರಿಯಾದ ದಿಕ್ಕನ್ನು ಪೂರ್ವ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ತಲೆಯನ್ನು ದಕ್ಷಿಣದಲ್ಲಿಟ್ಟು ಮಲಗಲು ಸಾಧ್ಯವಾಗದಿದ್ದರೆ, ನೀವು ಪೂರ್ವಕ್ಕೆ ತಲೆಯಿಟ್ಟು ಮಲಗಬಹುದು. ಇದನ್ನು ಮಾಡುವುದರಿಂದ ನೀವು ದೇವರ ಆಶೀರ್ವಾದವನ್ನು ಪಡೆಯುತ್ತೀರಿ. ಜೊತೆಗೆ, ಈ ದಿಕ್ಕಿನಿಂದ ಸೂರ್ಯನ ಆಗಮನದಿಂದಾಗಿ, ಇದನ್ನು ಜೀವ ನೀಡುವ ದಿಕ್ಕೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ನಿಮ್ಮ ಪಾದಗಳನ್ನಿಟ್ಟು ಮಲಗಬೇಡಿ. ಇದನ್ನು ಧಾರ್ಮಿಕ ದೃಷ್ಟಿಯಿಂದ ಅಶುಭವೆಂದು ಪರಿಗಣಿಸಲಾಗಿದೆ.
ಪೂರ್ವದಲ್ಲಿ ತಲೆ ಇಟ್ಟು ಮಲಗುವುದು ಶುಭಕರ.
ನಿಮ್ಮ ಮನೆಯಲ್ಲಿ ನೀವು ಮಾತ್ರ ಸಂಪಾದನೆ ಮಾಡುವವರಾಗಿದ್ದರೆ. ಅಥವಾ ನೀವು ಕೆಲಸ ಮತ್ತು ವ್ಯಾಪಾರ ಮಾಡುತ್ತಿದ್ದಲ್ಲಿ, ನಿಮ್ಮ ತಲೆಯನ್ನು ಪೂರ್ವ ದಿಕ್ಕಿನಲ್ಲಿಟ್ಟು ಮಲಗುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ತಲೆಯನ್ನು ಪೂರ್ವಕ್ಕೆ ಇಟ್ಟು ಮಲಗುವುದು ಒಳ್ಳೆಯದು. ಯಾಕೆಂದರೆ ಪೂರ್ವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಪೂರ್ವಕ್ಕೆ ಮಲಗಿ ಹೊಸ ಚೈತನ್ಯ ಪಡೆಯಿರಿ.
ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆಯ ನಿದ್ದೆ ಆಗುತ್ತದೆ. ಹೊಸ ಚೈತನ್ಯ, ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಈ ದಿಕ್ಕು ಒಳ್ಳೆಯದು. ಅನಾರೋಗ್ಯದಿಂದ ಬಳಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀನಿ ಅನ್ನೋರಿಗೆ ಪೂರ್ವ ದಿಕ್ಕು ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಲಿತ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ
ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ಖಂಡಿತಾ ಉತ್ತಮ ಅಲ್ಲ. ಆ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ. ಅದರ ಜೊತೆಗೆ ಬಹಳ ತೊಂದರೆಗಳೂ ಆಗುತ್ತವೆ. ಆದ್ದರಿಂದ ನಿದ್ರಿಸುವುದಕ್ಕೆ ಈ ದಿಕ್ಕನ್ನು ಸಲಹೆಯಾಗಿ ಮಾಡುವುದಿಲ್ಲ. ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ, ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ- ದಕ್ಷಿಣಕ್ಕೆ ಚಲಿಸುತ್ತಿರುತ್ತದೆ. ತಲೆಯನ್ನು ಉತ್ತರಕ್ಕೆ ಇಟ್ಟಾಗ ಆ ಅಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸ ಆಗುತ್ತದೆ. ಆದ್ದರಿಂದ ಉತ್ತರಕ್ಕೆ ತಲೆ ಹಾಕದಂತೆ ಮಲಗುವ ಹಾಸಿಗೆಯನ್ನು ಹೊಂದಿಸಬೇಕು.
ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ
ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದು ಅಷ್ಟೇನೂ ಒಳ್ಳೆಯದೇನಲ್ಲ. ಪಶ್ಚಿಮದ ಕಡೆಗೆ ತಲೆ ಇಟ್ಟು ಮಲಗಿದಾಗ ಪೂರ್ವದ ಕಡೆಗೆ ಕಾಲುಗಳು ಬರುತ್ತವೆ. ಭಗವಾನ್ ಸೂರ್ಯ ಪ್ರತ್ಯಕ್ಷ ದೈವ. ಸೂರ್ಯನಿಂದ ನಮಗೆ ಉತ್ತಮ ಆರೋಗ್ಯ, ಚೈತನ್ಯ, ಅಭಿವೃದ್ಧಿ, ಕೀರ್ತಿ ಪ್ರಶಸ್ತಿಗಳು ದೊರೆಯುತ್ತವೆ. ಹಾಗಾಗಿ ಸೂರ್ಯನಿಗೆ ಕಾಲುಗಳನ್ನು ತೋರಿಸಿ ಮಲಗಬಾರದು ಎನ್ನುತ್ತವೆ ಶಾಸ್ತ್ರಗಳು. ಅಷ್ಟೇ ಅಲ್ಲದೇ ಪಶ್ಚಿಮ ದಿಕ್ಕಿನ ಅಧಿಪತಿ ಶನೈಶ್ಚರ. ಇವರು ಜೀವನದಲ್ಲಿ ದುಃಖ, ಅನಾರೋಗ್ಯ ಇತರೆ ಬಾಧೆಗಳನ್ನು ನೀಡುವ ಗ್ರಹವಾಗಿದ್ದಾರೆ. ಆದರೆ, ಪ್ರಯಾಣ ಸಮಯದಲ್ಲಿ ಅಥವಾ ಪರ ಸ್ಥಳಗಳಲ್ಲಿ ಮಲಗುವಾಗ ಎಚ್ಚರಿಕೆ ವಹಿಸಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆರಂಭಿಸಿದ ಮೇಲೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತದೆ.
ಮಲಗುವ ಮುನ್ನ ಈ ಕೆಲಸ ಮಾಡಿ
ಶಾಸ್ತ್ರಗಳ ಪ್ರಕಾರ, ಋಷಿ ಮುನಿಗಳು ಸಂಜೆ, ಅಂದರೆ ಮುಸ್ಸಂಜೆಯ ವೇಳೆಯಲ್ಲಿ ಮಲಗಬಾರದು ಎಂದು ಹೇಳಿದ್ದಾರೆ. ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲು ಆಹಾರವನ್ನು ತೆಗೆದುಕೊಳ್ಳಬೇಕು. ಇದನ್ನು ಮಾಡುವವರು ಉದರ ಸಂಬಂಧೀ ಸಮಸ್ಯೆಗಳಿಂದ ದೂರವಿರುತ್ತಾರೆ. ತಡರಾತ್ರಿಯಲ್ಲಿ ಏಳುವುದನ್ನು ಸಹ ನಿದ್ರೆಗೆ ಅಡ್ಡಿಯಾದಂತೆ. ಮಲಗುವ ಮುನ್ನ ಮನಸ್ಸನ್ನು ಶಾಂತಗೊಳಿಸಿ ನಂತರ ದೇವರನ್ನು ಧ್ಯಾನಿಸಿದ ನಂತರ ಮಲಗಿಕೊಳ್ಳಿ.
ಒಳ್ಳೆಯ ನಿದ್ದೆ ಬರಲು ಕೆಲವು ಸಲಹೆ
ಒಳ್ಳೆಯ ನಿದ್ದೆ ಬರಬೇಕು ಅಂದರೆ ಬೀಮ್ ಗಳ ಕೆಳಗೆ ಮಲಗಬೇಡಿ. ಅಷ್ಟೇ ಅಲ್ಲ, ಅಂದರೆ ತಾರಸಿಗೆ ಹಾಕಿರುವ ಬೀಮ್ ಅಥವಾ ಯಾವುದೇ ಭಾರವಾದ ವಸ್ತುವಿನ ಅಡಿಯಲ್ಲಿ ಮಲಗಿದರೂ ಮಾನಸಿಕ ಖಿನ್ನತೆ ಹಾಗೂ ಆರೋಗ್ಯ ಸಮಸ್ಯೆ ಆಗುತ್ತದೆ.
ಇನ್ನು ಕೋಣೆಯ ಮೂಲೆಗಳಿಗೆ ನಿಮ್ಮ ಹಾಸಿಗೆ ಅಥವಾ ಮಂಚ ಹಾಕಬೇಡಿ. ಇದರಿಂದ ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಒತ್ತಡ ಆಗುತ್ತದೆ. ನಿಮ್ಮ ಸಾಮರ್ಥ್ಯವೂ ಕಡಿಮೆ ಆದಂತೆ ಅನಿಸುತ್ತದೆ.
ನಿಮ್ಮ ಮಂಚದ ಕೆಳಗೆ ಏನನ್ನೂ ಇಡಬಾರದು. ಅದು ಖಾಲಿಯಾಗಿಯೇ ಇರಬೇಕು. ಜಾಗ ಇದೆಯಲ್ಲಾ ಅನ್ನೋ ಕಾರಣಕ್ಕೆ ಬೇಡದ ವಸ್ತುಗಳನ್ನು ಇಡಬೇಡಿ.
~~ ಸಂಗ್ರಹ ~~