ಯಾವ ನಕ್ಷತ್ರದವರು ಹೇಗೆ ಕೆಲಸಗಳನ್ನು ಮಾಡುತ್ತಾರೆ ..?
ನಕ್ಷತ್ರಗಳಿಗೆ ಅನುಸಾರವಾಗಿ ಜಾತಕರು ತಮ್ಮ ಕೆಲಸಗಳನ್ನು ಹೇಗೆ ಮಾಡುತ್ತಾರೆ ..?
ರವಿಯ ನಕ್ಷತ್ರದವರು ..( ಕೃತ್ತಿಕಾ, ಉತ್ತರಾ, ಉತ್ತರಾಷಾಢ)
ಇವರಿಗೆ ಸಾಮಾನ್ಯವಾಗಿ ಎಲ್ಲರೂ ಸಹಾಯ ಮಾಡುವವರೇ ಸಿಗುತ್ತಾರೆ. ತಾವು ಮಾಡುವುದು ಕಡಿಮೆ ಆದರೂ ಇತರರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇವರು ಹೇಳಿದ್ದನ್ನು ಶಿರಸಾವಹಿಸಿ ಕೆಲಸ ಮಾಡಿಕೊಡುವವರು ಇರುತ್ತಾರೆ. ತಾವೇ ಕೆಲಸ ಮಾಡಬೇಕಾದ ಸಂಧರ್ಭದಲ್ಲಿ ಅಚ್ಚುಕಟ್ಟಾಗಿ , ಚೆನ್ನಾಗಿ , ಇತರರು ಹೊಗಳುವಂತೆ , ಎಷ್ಟು ಬೇಕೋ ಅಷ್ಟನ್ನು ಸಕಾಲಕ್ಕೆ ಮಾಡುತ್ತಾರೆ. ಆಫೀಸುಗಳಲ್ಲಿ ಇವರೇ ಅಧಿಕಾರಿಗಳಾಗಿ ಜನರಿಂದ ಕೆಲಸ ಮಾಡಿಸುತ್ತಾರೆ.
ಚಂದ್ರನ ನಕ್ಷತ್ರದವರು ..(ರೋಹಿಣೀ, ಹಸ್ತಾ, ಶ್ರವಣ)
ಇವರು ಸಾಮಾನ್ಯವಾಗಿ ಮನೆಗೆ ಬಂದವರನ್ನು ಚೆನ್ನಾಗಿ ಉಪಚರಿಸುತ್ತಾ, ಕುಟುಂಬಕ್ಕೆ ಆಗುವಷ್ಟು ಮಾತ್ರ ಕೆಲಸ ಮಾಡತಕ್ಕವರು ಆಗಿರುತ್ತಾರೆ. ಆಫೀಸಿನಲ್ಲಿ ಅಲ್ಲಿ ಇಲ್ಲಿ ಓಡಾಡಿಕೊಂಡು , ಹೆಚ್ಚು ಕೆಲಸ ಮಾಡದಿದ್ದರೂ , ಮಾಡಿದವರಂತೆ ತೋರಿಸಿಕೊಳ್ಳುತ್ತಾರೆ. ಮೃದುಮಾತುಗಳಿಂದಾಗಿ ಇವರ ಸ್ನೇಹಿತರು ಹಾಗೂ ಕುಟುಂಬದವರು ಇವರಿಗೆ ಕೆಲಸ ಮಾಡಿಕೊಡುತ್ತಾರೆ.
ಕುಜನ ನಕ್ಷತ್ರದವರು ..( ಮೃಗಶಿರಾ , ಚಿತ್ತಾ , ಧನಿಷ್ಠಾ)
ಇವರು ಮೈಬಗ್ಗಿಸಿ , ಮನೆಯ ಕೆಲಸಗಳನ್ನು ಇನ್ನೊಬ್ಬರಿಗೆ ಬಿಡದೇ ತಾವೇ ಮಾಡಿ ಮುಗಿಸುತ್ತಾರೆ. ಬೇರೆಯವರ ಮೇಲೆ ಅವಲಂಬನೆ ಇರುವುದೇ ಇಲ್ಲ. ಹೊರಗೆ ಅಥವಾ ಆಫೀಸುಗಳಲ್ಲಿ ತಮಗೆ ಕೊಟ್ಟ ಕೆಲಸವನ್ನು ಯಾರ ಸಹಾಯವೂ ಇಲ್ಲದಂತೆ
ಮಾಡುತ್ತಾರೆ. ಇನ್ನೊಬ್ಬರು ಪ್ರಶ್ನಿಸುವುದಕ್ಕೆ ಮೊದಲೇ ಅಚ್ಚು ಕಟ್ಟಿನ ಕೆಲಸ ಮಾಡಿರುತ್ತಾರೆ. ಮನೆಗೆಲಸ , ತೋಟದ ಕೆಲಸ , ಆಫೀಸಿನ ಕೆಲಸ ಯಾವುದಾದರೂ ಸರಿ…ಇವರು ಮಾಡುತ್ತಾರೆ.
ಬುಧನ ನಕ್ಷತ್ರದವರು ..( ಆಶ್ಲೇಷಾ , ಜೇಷ್ಠಾ , ರೇವತಿ )
ಸಮಯಕ್ಕೆ ತಕ್ಕ ಹಾಗೇ ಮಾಡುವರು ಇವರು. ನಾಳೆಯ ಕೆಲಸಗಳನ್ನು ಮಾಡುವ ಯೋಜನೆ ಮುಂಚೆಯೇ ಮಾಡಿರುತ್ತಾರೆ.
ಬಹಳ ಚಟುವಟಿಕೆಯಿಂದ ಪಟಪಟ ಅಂತ ಕೆಲಸ ಮುಗಿಸುತ್ತಾರೆ.
ಇವರು ಬುದ್ದಿ ಮಟ್ಟದ ಕೆಲಸಗಳನ್ನು ಮಾಡಿ ಭೇಷ್ ಎನಿಸಿಕೊಳ್ಳುತ್ತಾರೆ. ಕಷ್ಟದ ಕೆಲಸಗಳನ್ನು ಹಗುರ ಮಾಡಿಕೊಳ್ಳುತ್ತಾರೆ.
ಆಫೀಸು ಅಥವಾ ಹೊರಗಡೆಗಳಲ್ಲಿ , ಬೇರೆಯವರಿಗೆ ಸಲಹೆ ಕೊಡುತ್ತಾ ಜಾಣರೆನಿಸಿಕೊಂಡು , ಟೇಬಲ್ ವರ್ಕ್ ಅಥವಾ ಅಕೌಂಟ್ಸ್ ಗಳನ್ನು ಚೆನ್ನಾಗಿ ಮಾಡಿಮುಗಿಸುತ್ತಾರೆ.
ಗುರು ನಕ್ಷತ್ರದವರು ..( ಪುನರ್ವಸು , ವಿಶಾಖಾ , ಪೂರ್ವಾಭಾದ್ರಾ)
ಈ ನಕ್ಷತ್ರದವರನ್ನು ನಡೆಮುಡಿಹಾಸಿ , ಇವರ ಮಾತುಗಳಿಗೆ ಬೆಲೆ ಕೊಟ್ಟು , ನಡೆಸಿಕೊಳ್ಳುತ್ತಾರೆ ಜನ. ಎಲ್ಲೇ ಇದ್ದರೂ , ಎಲ್ಲೇ ಹೋದರೂ ಭೋದನೆ ಮಾಡುತ್ತಾ ಪ್ರಶಂಸೆಗೆ ಒಳಗಾಗುತ್ತಾರೆ. ಕೆಲಸದ ಇತಿಮಿತಿ ನೋಡಿ , ಧರ್ಮಕ್ಕೆ ಚ್ಯುತಿ ಬಾರದ ಹಾಗೆ ಕೆಲಸಮಾಡಿಕೊಳ್ಳುತ್ತಾರೆ. ಪೌರೋಹಿತ್ಯ ಮಾಡುವ ಕೆಲಸ ಚೆನ್ನಾಗಿ ಮಾಡುತ್ತಾರೆ .ಕುಳಿತುಕೊಂಡೇ ಎಲ್ಲವನ್ನೂ ಮಾಡುವ ಯೋಗ್ಯತೆ ಇವರಿಗೆ ಇರುತ್ತದೆ.
ಶುಕ್ರನ ನಕ್ಷತ್ರಗಳು..( ಭರಣೀ , ಪುಬ್ಬಾ , ಪೂ.ಷಾಢಾ, )
ಈ ನಕ್ಷತ್ರದವರು ಬೇಕಾದಾಗ ಮಾತ್ರ ಕೆಲಸ ಮಾಡುವವರು. ಇವರ ಅಂದ ಚಂದ ಲಾವಣ್ಯಗಳಿಂದ ಇತರರನ್ನು ಆಕರ್ಷಿಸಲು , ಇವರಿಗೆ ಕೆಲಸ ಹೇಳುವ ಮನಸ್ಸು ಯಾರಿಗೂ ಬರುವುದೇ ಇಲ್ಲ. ಆದರೂ ಜವಾಬ್ದಾರಿ ಇದ್ದಾಗ ಖಂಡಿತವಾಗಿಯೂ ಅಡುಗೆಯಿಂದ ಹಿಡಿದು ಧರ್ಮಶಾಸ್ತ್ರ ಭೋಧನೆಯ ಕೆಲಸವನ್ನೂ ಮಾಡುತ್ತಾರೆ.
ಹೊರಗೆ ಅಥವಾ ಆಫೀಸಿನಲ್ಲಿ ಇವರು ಮಾಡುವುದು ತಮಗೆ ಇಷ್ಟವಾದ ಕೆಲಸವನ್ನೇ ಆದ್ದರಿಂದ , ಉತ್ತಮವಾಗಿ ಮಾಡಿ ಹೆಸರು ಗಳಿಸುತ್ತಾರೆ.
ಶನಿಯ ನಕ್ಷತ್ರಗಳು .( ಪುಷ್ಯ , ಅನೂರಾಧ, ಉತ್ತರಾಭಾದ್ರ)
ಅತ್ಯಂತ ಕಷ್ಟಪಟ್ಟು ಕೆಲಸಮಾಡುವ ಜನರಿರವರು. ಉಚ್ಚ-ನೀಚ ಭಾವನೆ ಇಲ್ಲದೆ ಯಾವ ಕೆಲಸ ತಮಗೆ ಅಂತ ಬಂದರೂ , ಅದನ್ನು ಮಾಡಿಮುಗಿಸುತ್ತಾರೆ. ಕಲಾತ್ಮಕ ಕೆಲಸಗಳು ಇವರಿಗೆ ಬಾರದು. ದೊಡ್ಡದಾಗಿ ಏನು ಬೇಕಾದರೂ ಮಾಡುವರು. ಗುಡ್ಡವನ್ನು ಬೇಕಾದರೂ ಕೆತ್ತಿ , ನೆಲಸಮ ಮಾಡುವಂತಹವರು. ಅಂದರೆ ಕಷ್ಟಸಾಧ್ಯವಾದ ಕೆಲಸಗಳನ್ನು ಮಾಡಿಬಿಡುತ್ತಾರೆ. ಆದರೆ ಒಂದು ಕಡೆ ಕುಳಿತು ಬರೆಯುವ ಕೆಲಸ ಇವರಿಗೆ ಆಗುವುದಿಲ್ಲ.
ರಾಹು ನಕ್ಷತ್ರದವರು..( ಆರಿದ್ರಾ , ಸ್ವಾತೀ , ಶತಭಿಷಾ )
ಇವರು ಕೆಲವು ವೇಳೆ ವೇಗವಾಗಿಯೂ ಕೆಲವು ವೇಳೆ ನಿಧಾನವಾಗಿಯೂ ಕೆಲಸಗಳನ್ನು ಮಾಡುವವರು. ಮಾಡುವ ಕೆಲಸಗಳಲ್ಲಿ ವೈವಿಧ್ಯತೆ ಇದ್ದರೆ ಇವರಿಗೆ ಬಹಳ ಇಷ್ಟ. ಹೊಸತನ್ನು ಆವಿಷ್ಕಾರ ಮಾಡಿ ಎಲ್ಲರಿಗೂ ತೋರಿಸಲು ತವಕಿಸುತ್ತಾರೆ.
ಕೆಲವೊಮ್ಮೆ ಕೆಲಸಗಳು ಕಣ್ಣಿಗೆ ಕಂಡರೂ,
ತಪ್ಪಿಸಿಕೊಂಡು ಹೊರಟುಹೋಗುತ್ತಾರೆ.
ರಾತ್ರಿ ಕೆಲಸ ಮಾಡುವುದರಲ್ಲಿ , ಗುಪ್ತ ಚಟುವಟಿಕೆಗಳಲ್ಲೂ ಹೆಚ್ಚು ಒಲವು ಇರುತ್ತದೆ.
ಕೇತು ನಕ್ಷತ್ರದವರು…( ಅಶ್ವಿನೀ , ಮಖಾ, ಮೂಲಾ)
ಸಣ್ಣಪುಟ್ಟ ಕೆಲಸಗಳ ರಾಶಿಯನ್ನು ಒಟ್ಟು ಮಾಡಿಕೊಂಡು ಒಂದೊಂದಾಗಿ ಮುಗಿಸಿಬಿಡುತ್ತಾರೆ. ಇಷ್ಟವಿಲ್ಲದಿದ್ದರೆ ಅರ್ಧಕ್ಕೆ ಕೆಲಸ ಬಿಟ್ಟು ಹೋಗುವುದರಲ್ಲಿ
ನಿಸ್ಸೀಮರು. ಒಂದು ಕಡೆ ಅಂಟಿಕೊಂಡು ಕೆಲಸ ಮಾಡಲು ಇಚ್ಛಿಸುವುದಿಲ್ಲ ಅಥವಾ ಆಗುವುದಿಲ್ಲ. ಇವರು ಅಲ್ಪತೃಪ್ತರಾದ್ದರಿಂದ ಪಾಲಿಗೆ ಬಂದಷ್ಟು ಕೆಲಸ ಮಾಡಿ ಸುಮ್ಮನಾಗುತ್ತಾರೆ. ದೇವಸ್ಥಾನಗಳಲ್ಲಿ ಹಾಗೂ ಇತರೆಡೆ ಸ್ವಯಂಸೇವಕರಾಗಿ ಕೆಲಸ ಮಾಡುವರು.
ಈ ಮೇಲೆ ಹೇಳಿರುವುದು ವೈಯಕ್ತಿಕ ಜಾತಕಗಳಿಗೆ ಅಲ್ಲ .
~~ಸಂಗ್ರಹ~~