ಎಂಟರ ನಂಟಿನ ನಡಿಗೆ

ಭಾರತೀಯ ಜೀವನಪದ್ಧತಿಯಲ್ಲಿ ಎಂಟಕ್ಕೆ ಹೆಚ್ಚಿನ ಮಹತ್ವವಿದೆ, ಸ್ಥಾನವಿದೆ. ಅಷ್ಟ ಅಥವಾ ಎಂಟು ಐಶ್ವರ್ಯದಾಯಕ ಸಂಕೇತವಾಗಿದೆ. ಅಷ್ಟಲಕ್ಷ್ಮಿಯರು, ಅಷ್ಟದಿಕ್ಪಾಲಕರು, ಅಷ್ಟದಿಕ್ಕುಗಳು, ಅಷ್ಟಸಿದ್ಧಿಗಳು, ಅಷ್ಟವಸುಗಳು ಮುಂತಾದವು. ಅಣುಭೌತ ವಿಜ್ಞಾನದಲ್ಲಿ ಎಂಟಕ್ಕೆ ವಿಶೇಷ ಸ್ಥಾನವಿದೆ. ರಸಾಯನ ಶಾಸ್ತ್ರದಲ್ಲಿ ಆಮ್ಲಜನಕದ ಪರಮಾಣು ಸಂಖ್ಯೆ ಎಂಟು.
ಈ ಕೋವಿಡ್ ಸಂಕ್ರಮಣ ಕಾಲದಲ್ಲಿ ಮನೆಯಲ್ಲೇ ಮಾಡಬಹುದಾದ ಅತ್ಯಂತ ಸರಳ, ಹೆಚ್ಚಿನ ಮನೋ-ದೈಹಿಕ ಆರೋಗ್ಯಭಾಗ್ಯ ನೀಡುವ ಎಂಟರ (8) ಆಕಾರದ ಅಗಸ್ತ್ಯ ನಡಿಗೆ ವಿಶಿಷ್ಟವಾಗಿದೆ. ವಾಕಿಂಗ್ ವ್ಯಾಯಾಮಗಳಲ್ಲಿ ಎಂಟರ ಆಕಾರದ ನಡಿಗೆ ವಿಧಾನವು ಪವಾಡಸದೃಶ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ವಿಧಾನಗಳಲ್ಲಿ ಒಂದು.ಅಗಸ್ತ್ಯ ಮಹರ್ಷಿಗಳ ಅಗಸ್ತ್ಯ ಸಂಹಿತೆಯಲ್ಲಿ ಈ ನಡಿಗೆಯ ಪ್ರಸ್ತಾಪನೆಯನ್ನು ಕಾಣಬಹುದಾಗಿದೆ. ಸಿದ್ಧರ ಆರೋಗ್ಯಸಿದ್ಧಿಯಲ್ಲಿ ಎಂಟರ ಆಕಾರದ ನಡಿಗೆ ವಿಶೇಷ ಸ್ಥಾನ ಪಡೆದಿದೆ. ಪ್ರತಿದಿನ 16 ರಿಂದ 32 ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡಬೇಕು. ವಿದೇಶಗಳಲ್ಲಿ ಜನಪ್ರಿಯವಾಗಿರುವ ಈ ನಡಿಗೆ ವಿಧಾನ ಇತ್ತೀಚೆಗೆ ಭಾರತದ ಉದ್ಯಾನದಲ್ಲಿ ಎಂಟರ ಆಕಾರದ ವಾಕ್ಫೂಟೇಜ್ ಕಾಣಸಿಗುತ್ತಿದೆ.

ಎಂಟರ ನಡಿಗೆ ಮಾಡುವ ವಿಧಾನ:

ಬೆಳಗ್ಗೆ, ಸಂಜೆ ಖಾಲಿ ಹೊಟ್ಟೆಯಲ್ಲಿ ಉದ್ಯಾನದಲ್ಲಿ, ಮನೆಯೊಳಗೆ ಅಥವಾ ಹೊರಗೆ ಇದನ್ನು ಅಭ್ಯಾಸ ಮಾಡಿ. ಉತ್ತರ-ದಕ್ಷಿಣ ದಿಕ್ಕಿಗೆ ನಡಿಗೆ ಅಭ್ಯಾಸ ಮಾಡಿ. ನಡೆಯುವಾಗ ಓಂಕಾರ ಪಠಣ ಅಥವಾ ‘ಓಂ ಗಂ ಗಣಪತಯೇ ನಮಃ’ ಮಂತ್ರ ಅಥವಾ ನಿಮ್ಮಿಷ್ಟದ ಯಾವುದೇ ಮಂತ್ರ ಪಠಣ ಉತ್ತಮ.
ಉತ್ತರದಿಂದ-ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಸಮನಾಂತರ ರೇಖೆಗಳನ್ನು ಎಳೆಯಿರಿ ಮತ್ತು ಹತ್ತು ಅಡಿ ಅಂತರವನ್ನು ಬಿಟ್ಟು ಎಂಟರ ಆಕಾರದ ರೇಖೆಯನ್ನು ಎಳೆಯಿರಿ: ಈಗ ಎಂಟರ ಆಕಾರದ ನಡಿಗೆ ಅಭ್ಯಾಸ ಮಾಡಿ. ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ಎಂಟೆಂಟು ನಿಮಿಷ ನಡೆಯಿರಿ. ಮೊದಲು ಎಂಟರ ಆಕಾರದ ವಾಕಿಂಗ್ ಅಭ್ಯಾಸ ಮಾಡಿ. ನಂತರ ಇತರ ಉಸಿರಾಟ ವ್ಯಾಯಾಮಗಳನ್ನು ಮಾಡಬಹುದು.

ಈ ನಡಿಗೆಯಲ್ಲಿ ನಾವು ಅಗತ್ಯವಾಗಿ ಎಂಟರ ಆಕಾರದ ಸಾಲಿನಲ್ಲೇ ನಡೆಯಲು ಗಮನ ಹರಿಸುತ್ತೇವೆ. ಇದು ಏಕಾಗ್ರತೆ ಹೆಚ್ಚಲು ಸಹಕಾರಿ. ಸಾಮಾನ್ಯ ವಾಕಿಂಗ್ನಂತೆ ವೈಯಕ್ತಿಕವಾಗಿ ಅಥವಾ ಮೊಬೈಲ್ ಚಾಟ್ ಮಾಡುವ ಸಾಧ್ಯತೆಯನ್ನು ತಪ್ಪಿಸಬೇಕಾಗುತ್ತದೆ. ಸರಿಯಾದ ಮತ್ತು ಸಾಮಾನ್ಯ ಉಸಿರಾಟ ಸಾಧ್ಯ. ಉದ್ಯಾನದಲ್ಲಾದರೆ ಕಲ್ಲುಮುಳ್ಳುಗಳು ತುಂಬಿರದ ಹಸಿರು ಹುಲ್ಲಿನ ಮೇಲೆ ಸಾಧ್ಯವಾದರೆ ಬರಿಗಾಲಿನಲ್ಲಿಯೇ ನಡೆಯಬೇಕು.
ನಮ್ಮ ಕೈಯಲ್ಲಿ, ಅಂಗೈ ಮತ್ತು ಪಾದದ ತಳದಲ್ಲಿ ನಮ್ಮ ಸಂಪೂರ್ಣ ಆಂತರಿಕ ಅಂಗಗಳ ಗ್ರಂಥಿಗಳ ಪ್ರತಿಕ್ರಿಯಾತ್ಮಕ ಬಿಂದುಗಳಿವೆ. ನಡೆಯುವ ಸಮಯದಲ್ಲಿ ಈ ಪ್ರತಿಫಲಿತ ಬಿಂದುಗಳು ಸಕ್ರಿಯಗೊಳ್ಳುತ್ತವೆ ಮತ್ತು ಸಂಬಂಧಿತ ಕಾಯಿಲೆಗಳಿಂದ ನಮಗೆ ಪರಿಹಾರ ಸಿಗುತ್ತದೆ.

ಎಂಟರ ನಡಿಗೆಯ ಲಾಭಗಳು:

  • ಈ ನಡಿಗೆಯ ಸಮಯ ಸೊಂಟ, ಹೊಟ್ಟೆ ತಿರುಚಲ್ಪಡುತ್ತದೆ. ಜೀರ್ಣಾಂಗ ವ್ಯೂಹಕ್ಕೆ ಉತ್ತಮ ಪ್ರಚೋದನೆ ಸಿಗುತ್ತದೆ. * 16ರಿಂದ 32 ನಿಮಿಷಗಳ ದೀರ್ಘ ಉಸಿರಾಟದ ಈ ವಾಕಿಂಗ್ – ಕಟ್ಟಿದ ಮೂಗನ್ನು, ಸೈನಸ್ ಅನ್ನು ಸರಾಗಗೊಳಿಸುತ್ತದೆ. * ಮುಕ್ತ ಉಸಿರಾಟಕ್ಕೆ ಸಹಕಾರಿಯಾಗಿ ಕಫ ನಿವಾರಣೆಯಾಗಿ ಅಸ್ತಮಾ ಸಮಸ್ಯೆ ಪರಿಹಾರವಾಗುತ್ತದೆ.
  • ಸಂಪೂರ್ಣ ದೀರ್ಘ ಉಸಿರಾಟದಿಂದಾಗಿ ಸುಮಾರು ಐದು ಕಿಲೋಗ್ರಾಂ ಆಮ್ಲಜನಕವನ್ನು ಸೇವಿಸುವುದರಿಂದ ದೇಹಕ್ಕೆ ಪ್ರಾಣ-ತ್ರಾಣ ಲಭಿಸುತ್ತದೆ. * ಹೆಚ್ಚಿನ ಶಕ್ತಿಸಂಚಾರದಿಂದ ತಲೆನೋವು, ಅರೆತಲೆನೋವು ಮಾಯವಾಗುತ್ತದೆ. * ಥೈರಾಯ್ಡ್, ಬೊಜ್ಜು, ಸಂಧಿವಾತ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.

ಪ್ರತಿನಿತ್ಯ ಶ್ರದ್ಧೆಯಿಂದ ಮಾಡುವ ಈ ಎಂಟರ ಆಕಾರದ ವಾಕಿಂಗ್ ಕೆಲವೇ ತಿಂಗಳಲ್ಲಿ ರಕ್ತದೊತ್ತಡ, ನಿದ್ರಾಹೀನತೆ, ಮಧುಮೇಹ ತೊಂದರೆಗಳನ್ನು ನಿಯಂತ್ರಿಸಿ ದೃಷ್ಟಿಯನ್ನು ಸುಧಾರಿಸುತ್ತದೆ. ವಯಸ್ಸಾದ ವ್ಯಕ್ತಿಗಳು ಇತರರ ಸಹಾಯದೊಂದಿಗೆ ಮನೆಯಲ್ಲೇ ಎರಡು ಕುರ್ಚಿಗಳ ನಡುವೆ ನಡೆದು ಪ್ರಯೋಜನವನ್ನು ಹೊಂದಬಹುದು.

ಡಾ . ರಾಘವೇಂದ್ರ ಪೈ
ಯೋಗ ತಜ್ಞರು
ವಿಜಯವಾಣಿ

~~ ಸಂಗ್ರಹ ~~